SNEH MILAN, Karnataka
03/03/24
ದಿನಾಂಕ 03-03-2024, ಭಾನುವಾರ ಭಗವದ್ಗೀತಾ ಪ್ರೇಮಿಗಳಿಗೆ ಅತ್ಯಂತ ಸಂತೋಷದ ದಿನ. ಬೆಂಗಳೂರು ಹಾಗೂ ಹತ್ತಿರದ ಸ್ಥಳಗಳ ಗೀತಾ ಪರಿವಾರದ ಕಾರ್ಯಕರ್ತರಿಗೆ ಅಂತಾರಾಷ್ಟ್ರೀಯ ಕಾರ್ಯಾಧ್ಯಕ್ಷರಾದ ಡಾ. ಆಶು ಗೋಯಲ್ ಭೈಯ್ಯಾ ಅವರನ್ನು ಮುಖತಃ ಭೇಟಿಯಾಗುವ ಸುಸಂದರ್ಭವು ಒದಗಿಬಂದಿತ್ತು. ಪೂಜ್ಯ ಸ್ವಾಮೀಜಿ ಶ್ರೀ ಗೋವಿಂದದೇವಗಿರಿಜೀ ಮಹಾರಾಜ್ ಅವರ `ಪ್ರತಿ ಕರದಲ್ಲೂ ಗೀತೆ, ಪ್ರತಿ ಮನೆಯಲ್ಲೂ ಗೀತೆ' ಎನ್ನುವ ಮಹಾ-ಅಭಿಯಾನದಲ್ಲಿ ಶ್ರೀ ಆಶು ಗೋಯಲ್ ಭೈಯ್ಯಾ ಅವರಂತಹ ಮಹನೀಯರು ನಿಸ್ವಾರ್ಥದಿಂದ ಕೈಜೋಡಿಸಿದ್ದಾರೆ. ದೇಶ-ವಿದೇಶಗಳಲ್ಲಿ ಸಾವಿರಾರು ಕಾರ್ಯಕರ್ತರು ಸ್ವಯಂಸೇವಕರಾಗಿ ಈ ಅಭಿಯಾನದಲ್ಲಿ ಜೊತೆಯಾಗಿದ್ದಾರೆ. ಪೂಜ್ಯ ಸ್ವಾಮೀಜಿಯವರ ಆಶೀರ್ವಾದದೊಂದಿಗೆ ಶ್ರೀ ಆಶು ಭೈಯ್ಯಾ ಅವರ ಸಾರ್ಥಕ ನೇತೃತ್ವದಲ್ಲಿ ಲಕ್ಷಾಂತರ ಜನರು ಆನ್ಲೈನ್ ಮೂಲಕ ಭಗವದ್ಗೀತೆಯನ್ನು ಸಂಸ್ಕೃತ ವ್ಯಾಕರಣಕ್ಕನುಸಾರವಾಗಿ ಕಲಿಯುತ್ತಿದ್ದಾರೆ.
ಬೆಂಗಳೂರಿನ ವಿದ್ಯಾರಣ್ಯಪುರದಲ್ಲಿರುವ ಶ್ರೀ ಕಾಳಿಕಾ ದುರ್ಗಾ ಪರಮೇಶ್ವರಿ ದೇವಸ್ಥಾನದಲ್ಲಿ ಏರ್ಪಡಿಸಲಾಗಿದ್ದ `ಶ್ರೀ ಆಶು ಭೈಯ್ಯಾರವರೊಂದಿಗೆ ಸ್ನೇಹಕೂಟ ಕಾರ್ಯಕ್ರಮ'ವು ಬಹಳ ಆಪ್ತವಾಗಿ ನಡೆಯಿತು. ಬೆಂಗಳೂರು, ಮೈಸೂರು ಮತ್ತು ಉಡುಪಿಯ ಗೀತಾ ಪರಿವಾರದಿಂದ ನಡೆಯುತ್ತಿರುವ ಕಾರ್ಯಚಟುವಟಿಕೆಗಳ ಬಗ್ಗೆ ಶ್ರೀಮತಿ ರಾಧಾ, ಶ್ರೀ ಶ್ರೀನಾಥ್ ಹಾಗೂ ಶ್ರೀಮತಿ ಗಾಯತ್ರಿ ಹೊಳ್ಳ ಅವರಿಂದ ವರದಿಯನ್ನು ಸಲ್ಲಿಸಲಾಯಿತು. ಶ್ರೀಮತಿ ಪೂಜಾ ಡೋಂಗ್ರೆ ಅವರು ಗೀತಾಸೇವಿಗಳಿಗೆ ಶ್ರೀ ಆಶು ಭೈಯ್ಯಾ ಅವರ ಪರಿಚಯವನ್ನು ನೀಡಿದರು. ಶಾಲಾ ಮಕ್ಕಳಿಗೆ ಆಫ್ಲೈನ್ನಲ್ಲಿ ಭಗವದ್ಗೀತೆಯನ್ನು ಹೇಳಿಕೊಡುತ್ತಿರುವ ಗೀತಾಸೇವಿಗಳನ್ನು ಶ್ರೀ ಆಶು ಭೈಯ್ಯಾ ಅವರು ಅಭಿನಂದಿಸಿದರು.
ಗೀತಾ ಸೇವಿಗಳಿಂದ ಸನ್ಮಾನವನ್ನು ಸ್ವೀಕರಿಸಿದ ಶ್ರೀ ಆಶು ಭೈಯ್ಯಾ ಅವರು ಭಗವದ್ಗೀತೆಯನ್ನು ನಮ್ಮ ಜೀವನದಲ್ಲಿ ಹೇಗೆ ಅಳವಡಿಸಿಕೊಳ್ಳಬಹುದು ಎಂಬುದನ್ನು ಸರಳವಾಗಿ, ಪ್ರಾತ್ಯಕ್ಷಿಕೆಯ ಮೂಲಕ ಕಾರ್ಯಕರ್ತರಿಗೆ ವಿವರಿಸಿದರು. ಹೇಗೆ ಕೈಬೆರಳುಗಳಲ್ಲಿ ವ್ಯತ್ಯಾಸವಿದ್ದರೂ, ಅವು ಒಂದಾಗಿ ಮುಷ್ಟಿಯಾಗುವಂತೆ, ಯಾರ ಕಾರ್ಯವೂ ಕೂಡ ಕನಿಷ್ಠವಲ್ಲ. ಅವರವರ ಪಾಲಿಗೆ ಬಂದ ಕಾರ್ಯವನ್ನು ಫಲಾಪೇಕ್ಷೆ ಇಲ್ಲದೆ ಮಾಡಿದರೆ ಯಾವುದೇ ಸದುದ್ದೇಶವುಳ್ಳ ಕಾರ್ಯಕ್ರಮವು ಸಫಲವಾಗುತ್ತದೆ ಎಂದರು. ಯಾರಿಗಾದರೂ ಉಪದೇಶಿಸುವ ಮೊದಲು ನಾವು ನಮ್ಮನ್ನು ತಿದ್ದಿಕೊಳ್ಳಬೇಕು ಎನ್ನುತ್ತಾ, ಗಾಂಧೀಜಿಯು ಬೆಲ್ಲ ತಿನ್ನುತ್ತಿರುವ ಹುಡುಗನಿಗೆ ಅದನ್ನು ಬಿಡಲು ಹೇಳಬೇಕಾದರೆ, ಗಾಂಧೀಜಿಯು ತಾವು ಮೊದಲು ಬೆಲ್ಲ ತಿನ್ನುವ ಅಭ್ಯಾಸವನ್ನು ಬಿಟ್ಟ ಘಟನೆಯನ್ನು ಹೇಳಿದರು. ಭಗವದ್ಗೀತೆಯ `ನ ಚ ತಸ್ಮಾನ್ಮನುಷ್ಯೇಷು, ಕಶ್ಚಿನ್ಮೇ ಪ್ರಿಯಕೃತ್ತಮಃ' ಸಾಲನ್ನು ಉದ್ಧರಿಸುತ್ತಾ, ಭಗವಂತನಲ್ಲಿ ಅನನ್ಯ ಪ್ರೇಮವನ್ನಿರಿಸಿರುವ ಯಾರೇ ಆದರೂ ಭಗವದ್ಗೀತೆಯನ್ನು ಪಠಿಸಿದರೆ ಅವನು ಶ್ರೀಕೃಷ್ಣನ ಪ್ರಿಯಭಕ್ತನಾಗುತ್ತಾನೆ ಎಂದರು. ಏಕೆಂದರೆ ಭಗವದ್ಗೀತೆಯ ಶ್ಲೋಕಗಳಲ್ಲಿ ಜೀವನದ ಸಮಸ್ಯೆಗಳಿಗೆ ಪರಿಹಾರವಿದೆ, ಅದರಿಂದ ಎಲ್ಲರಲ್ಲೂ ಭಾವನೆಗಳು ಪರಿಶುದ್ಧವಾಗುತ್ತವೆ. ಅಂತಹ ನಿಷ್ಕಲ್ಮಷ ಹೃದಯವುಳ್ಳ ವ್ಯಕ್ತಿ ಭಗವಂತನಿಗೆ ಪ್ರಿಯನಾಗುತ್ತಾನೆ ಎಂದು ಶ್ರೀಮದ್ಭಗವದ್ಗೀತೆಯ ಮಹತ್ವವನ್ನು ತಿಳಿಸಿದರು.
ನಂತರ ಅವರು ಗೀತಾಸೇವಿಗಳೊಂದಿಗೆ ಆತ್ಮೀಯವಾಗಿ ಸಂವಾದ ನಡೆಸಿದರು. ಎಲ್ಲರ ಸಂದೇಹಗಳನ್ನು ಸೂಕ್ತವಾಗಿ ಪರಿಹರಿಸಿದರು. ಭಗವದ್ಗೀತಾದ ಚಾರ್ಧಾಮ ಯಾತ್ರೆಯಲ್ಲಿ (ನಾಲ್ಕು ಹಂತಗಳ ಕಲಿಕೆ) ಪಾಲ್ಗೊಂಡಿರುವ ಗೀತಾಸೇವಿಗಳಿಗೆ ತಮ್ಮ ಹಿತವಚನಗಳಿಂದ ಸ್ಫೂರ್ತಿ ತುಂಬಿದರಲ್ಲದೆ, ಸೂಕ್ತ ಮಾರ್ಗದರ್ಶನವನ್ನೂ ನೀಡಿದರು.
ಶ್ರೀಮತಿ ಸೀಮಾ ಎಚ್.ಎಸ್. ಹಾಗೂ ಶ್ರೀಮತಿ ತನ್ವಿ ದೇಸಾಯಿ ಅವರು ಕಾರ್ಯಕ್ರಮವನ್ನು ನಿರೂಪಿಸಿದರು. ಶ್ರೀ ಪ್ರಶಾಂತ ಕಾಮತ್ ಅವರು ಸ್ವಾಗತ ನುಡಿಗಳನ್ನಾಡಿದರು ಹಾಗೂ ಕಾರ್ಯಕ್ರಮವನ್ನು ವ್ಯವಸ್ಥಿತವಾಗಿ ಆಯೋಜಿಸಿದ ಎಲ್ಲರಿಗೂ ಶ್ರೀಮತಿ ಅರುಣಾ ಕೆ.ಆರ್. ಅವರು ವಂದನೆಯನ್ನು ಸಲ್ಲಿಸಿದರು. ಶ್ರೀ ಆಶು ಗೋಯಲ್ ಭೈಯ್ಯಾ ಅವರೊಂದಿಗಿನ ಈ ಸ್ನೇಹಕೂಟವು ಅಲ್ಲಿ ಸೇರಿದ್ದ ಎಲ್ಲಾ ಗೀತಾಸೇವಿಗಳಿಗೂ `ಆನಂದೋತ್ಸವ'ದ ಅನುಭವವನ್ನು ನೀಡಿತು.
